ವೆಂಕಟಪ್ಪ, ಕೆ

 	1888-1965. ಖ್ಯಾತ ಕಲಾವಿದರು. ಶಿಲ್ಪ, ವರ್ಣಚಿತ್ರ, ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನಲ್ಲಿ ಉಬ್ಬುಶಿಲ್ಪ, ತಾಮ್ರದ ತಗಡಿನ ಮೇಲೆ ಉಬ್ಬುಶಿಲ್ಪ, ವೀಣೆಗಳ ರಚನೆ, ವೀಣಾವಾದನ-ಇವುಗಳಲ್ಲಿ ಸಿದ್ಧಹಸ್ತರಾಗಿದ್ದರು.
	ಪ್ರಸಿದ್ಧ ಚಿತ್ರಕಾರರಾಗಿದ್ದ ಚಿತ್ರದುರ್ಗದ ವೆಂಕಟಪ್ಪನವರು ಇವರ ತಾತ. ಇವರ ತಂದೆ ಕೃಷ್ಣಪ್ಪ. ವೆಂಕಟಪ್ಪನವರ ವಂಶದವರು ಮೂಲತಃ ಚಿತ್ರದುರ್ಗದವರು. ಅನಂತರ ಮೈಸೂರಿಗೆ ಬಂದು ನೆಲಸಿದರು. ಇವರು ತಮ್ಮ ಬಾಲ್ಯ, ಯೌವನಗಳನ್ನು ವಿಶೇಷವಾಗಿ ಮೈಸೂರಿನಲ್ಲೇ ಕಳೆದರು. ಚಾಮರಾಜೇಂದ್ರ ಕಲಾಶಾಲೆಯಲ್ಲಿ ಕಲಾಭ್ಯಾಸ ಮಾಡಿದರು. ಹೊಸ ಅರಮನೆಯನ್ನು ಕಟ್ಟುವ ಕಾಲದಲ್ಲಿ ನೂರಾರು ಜನ ಕಲಾವಿದರು ಕೆಲಸ ಮಾಡಬೇಕಾದ ಸಂದರ್ಭ ಬಂದಾಗ ಬಾಲಕರಾದ ಇವರಿಗೂ ಅವಕಾಶ ಸಿಕ್ಕಿತು. ಇವರ ಕಲಾಪ್ರತಿಭೆಯನ್ನು ಮೆಚ್ಚಿದ ನಾಲ್ವಡಿ ಕೃಷ್ಣರಾಜ ಒಡೆಯರು ಇವರ ಹೆಚ್ಚಿನ ಕಲಾಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟು ಪ್ರೋತ್ಸಾಹಿಸಿದರು. ಈ ಮೊದಲೇ ಪಾಶ್ಚಾತ್ಯ ಕಲಾಸಂಪ್ರದಾಯವನ್ನು ಕೈಗೂಡಿಸಿಕೊಂಡು ಮದರಾಸು ಚಿತ್ರಕಲಾ ಪರೀಕ್ಷೆಗಳಲ್ಲಿ ಡಿಪ್ಲೊಮ ಗಳಿಸಿದ್ದ ಇವರು 1908ರಲ್ಲಿ ಸರ್ಕಾರದ ವಿದ್ಯಾರ್ಥಿವೇತನ ಪಡೆದು ಉನ್ನತ ಶಿಕ್ಷಣಕ್ಕಾಗಿ ಕಲ್ಕತ ಕಲಾಶಾಲೆಯನ್ನು ಪ್ರವೇಶಿಸಿದರು. ಅಲ್ಲಿ ಪರ್ಸಿ ಬ್ರೌನ್ ಹಾಗೂ ಅಬನೀಂದ್ರನಾಥ ಠಾಕೂರ್ (ನೋಡಿ- ಅಬನೀಂದ್ರನಾಥ-ಠಾಕೂರ್) ಅವರ ಮಾರ್ಗದರ್ಶನದಲ್ಲಿ ತಮ್ಮ ಕಲಾಭ್ಯಾಸವನ್ನು ಮುಂದುವರಿಸಿದರು. ಕಲ್ಕತದಲ್ಲಿ ಇವರು ಆರೇಳು ವರ್ಷಗಳ ಕಾಲವಿದ್ದು ಬೌದ್ಧ, ರಜಪೂತ ಮತ್ತು ಮೊಗಲ್ ಸಂಪ್ರದಾಯಗಳನ್ನು ಅಭ್ಯಾಸ ಮಾಡಿದರು. ಅನಂತರ 1916ರಲ್ಲಿ ಕಲ್ಕತದಿಂದ ಮೈಸೂರಿಗೆ ಹಿಂದಿರುಗಿದ ಮೇಲೆ ಸಂಗೀತದ ಅಭಿರುಚಿಯಿಂದ ವೀಣೆ ಶೇಷಣ್ಣನವರಲ್ಲಿ ಏಳು ವರ್ಷಗಳ ಕಾಲ ವೀಣಾಭ್ಯಾಸ ಮಾಡಿದರು. ಇದೇ ಸಂದರ್ಭದಲ್ಲಿ ಇವರ ಶ್ರೇಷ್ಠ ಕೃತಿ ವೀಣಾ ಹುಚ್ಚು ಜಲವರ್ಣದಲ್ಲಿ ರಚಿತವಾಯಿತು. ಇದೇ ಸಂದರ್ಭದಲ್ಲಿ ಅಬನೀಂದ್ರನಾಥರು ಬಿಟ್ಟುಕೊಟ್ಟ ಕಲ್ಕತ ಕಲಾಶಾಲೆಯ ಮುಖ್ಯ ಪ್ರಾಧ್ಯಾಪಕ ಸ್ಥಾನಕ್ಕೆ ಇವರಿಗೆ ಆಹ್ವಾನ ಬಂದಾಗ ಅದನ್ನು ನಿರಾಕರಿಸಿ, ಮೈಸೂರಿನಲ್ಲಿಯೇ ಉಳಿದರು.

	1923ರಲ್ಲಿ ಮೈಸೂರು ಅರಮನೆಯಲ್ಲಿ ಶಿಲ್ಪಕೃತಿಗಳ ರಚನೆಗೆ ಇವರು ತೊಡಗಿದರು. ಆಗ ಇವರು ರಚಿಸಿದ ಕೆಲವು ಉಬ್ಬುಶಿಲ್ಪಗಳು (ಬ್ಯಾಸ್ ರಿಲೀಫ್) ಈಗಲೂ ಅರಮನೆಯಲ್ಲಿವೆ.

	ಇವರು ಜಲವರ್ಣ ಪ್ರಕೃತಿ ಚಿತ್ರಗಳ ಜೊತೆಗೆ ದಂತದ ಫಲಕದ ಮೇಲೆ ನೀರು ಬಣ್ಣದಲ್ಲಿ ರೂಪ ಚಿತ್ರ ಹಾಗೂ ಕಾವ್ಯ ಕಥಾ ಚಿತ್ರಗಳನ್ನು ರಚಿಸಿದ್ದಾರೆ. ಮೈಸೂರಿನ ಜಗನ್ಮೋಹನ ಕಲಾಶಾಲೆಯಲ್ಲಿ ಇವರ ವೀಣಾ ಹುಚ್ಚು, ರಾಧಾ ಹರಿಣಿ, ಅರ್ಧನಾರೀಶ್ವರ, ಶಿವರಾತ್ರಿ ಮತ್ತು ನೀಲಗಿರಿಯ ದೃಶ್ಯಗಳು ಇಂದಿಗೂ ಕಲಾಭಿಮಾನಿಗಳನ್ನು ಆಕರ್ಷಿಸುತ್ತವೆ. ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನ ಉಬ್ಬುಶಿಲ್ಪರಚನೆಯಲ್ಲಿ ಇವರು ಚಿತ್ರಕಲೆಯಲ್ಲಿನ ಅದ್ವಿತೀಯ ಪ್ರೌಢಿಮೆ ತೋರಿಸಿದ್ದಾರೆ. ಏಕಲವ್ಯನ ಧನುರ್ವಿದ್ಯಾಭ್ಯಾಸ; ಕೌರವ ಪಾಂಡವರಿಗೆ ದ್ರೋಣಾಚಾ ರ್ಯರಿಂದ ಬಿಲ್ಲುವಿದ್ಯೆ ಶಿಕ್ಷಣ, ಶಿವತಾಂಡವ ನೃತ್ಯ, ಶಾಕುಂತಲೆಯ ಬೀಳ್ಕೊಡುಗೆ, ಸಿದ್ಧಾರ್ಥನ ನಿರ್ಗಮನ ಮುಂತಾದ ಉಬ್ಬುಶಿಲ್ಪಗಳು ಗಮನಾರ್ಹವಾದುವು.

	ಶಿಲ್ಪಕಲೆಯಲ್ಲಿಯೂ ನಿಷ್ಣಾತರಾಗಿದ್ದ ಇವರು ರಚಿಸಿದ ಪ್ರತಿಮೆಗಳಲ್ಲಿ ರವೀಂದ್ರರದು ವಿಶಿಷ್ಟವಾದುದು. 1922ರಲ್ಲಿ ರವೀಂದ್ರರು ಮೈಸೂರಿಗೆ ಬಂದಿದ್ದಾಗ ಅವರ ಭಾವಚಿತ್ರಗಳ ನೆರವಿನಿಂದ ರಚಿಸಿದ ಕೃತಿ ಇದು. ಇವರ ಮಾಣಿ ಇಂಥದ್ದೇ ಇನ್ನೊಂದು ಅಪೂರ್ವಕೃತಿ. ಆಕಸ್ಮಿಕವಾಗಿ ಭಿನ್ನವಾಗಿರುವ ಸಿದ್ಧಾರ್ಥ ಕೂಡ ಅತ್ಯಂತ ಮೋಹಕವಾದ ತಾಮ್ರದ ಉಬ್ಬುಶಿಲ್ಪ. ಇವರಿಗೆ ಕೇಂದ್ರ ಲಲಿತ ಕಲಾ ಅಕಾಡೆಮಿ 1962ರಲ್ಲಿ ಪ್ರಶಸ್ತಿಯ ಜೊತೆಗೆ ಗೌರವ ಸದಸ್ಯತ್ವ ಕೊಟ್ಟು ಸನ್ಮಾನಿಸಿತು.

	ತಮ್ಮ ಬದುಕಿನ ಕೊನೆಯವರೆಗೂ ಕಲಾಸೇವೆಯಲ್ಲಿಯೇ ನಿರತರಾಗಿದ್ದ ಇವರು 1965 ಮೇ 25ರಂದು ಬೆಂಗಳೂರಿನಲ್ಲಿ ನಿಧನ ರಾದರು. ಇವರ ಹೆಸರಿನಲ್ಲಿ ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲ ಯದ ಪಕ್ಕದಲ್ಲೇ ಒಂದು ಕಲಾಸಂಗ್ರಹಾಲಯವನ್ನು ತೆರೆಯಲಾಗಿದೆ. ಇಲ್ಲಿ ಇವರ ಸಮಗ್ರ ಚಿತ್ರಗಳನ್ನು, ಶಿಲ್ಪಕೃತಿಗಳನ್ನು, ಇವರು ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶಿಸಲಾಗಿದೆ. 
(ಪಿ.ಆರ್.ಟಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ